ತಾಂತ್ರಿಕ ಶಿಕ್ಷಣ -
	ಉದ್ಯೋಗ ಮತ್ತು ವೃತ್ತಿಗಳಿಗೆ ಸಂಬಂಧಿಸಿದ ಜ್ಞಾನ ಮತ್ತು ಕೌಶಲ್ಯಗಳಲ್ಲಿ, ಮುಖ್ಯವಾಗಿ ಯಂತ್ರ ಮತ್ತು ವೈಜ್ಞಾನಿಕ ಉಪಕರಣಗಳನ್ನು ಬಳಸಿಕೊಂಡು ಕಾರ್ಯ ನಿರ್ವಹಣೆ ಮಾಡುವುದಕ್ಕೆ ಸಂಬಂಧಿಸಿದ ಶಿಕ್ಷಣ (ಟೆಕ್ನಿಕಲ್ ಎಜುಕೇಷನ್). ಭಾರತದಲ್ಲಿ ಈ ಪಾರಿಭಾಷಿಕವನ್ನು ಮುಖ್ಯವಾಗಿ ವಿಶ್ವವಿದ್ಯಾಲಯದ ಮಟ್ಟದ ಸೈದ್ಧಾಂತಿಕ ಪಠ್ಯಕ್ರಮವನ್ನೊಳಗೊಂಡ ಶಿಕ್ಷಣಕ್ಕೆ ಬಳಸುವುದುಂಟು. 

	ಡಿಪ್ಲೊಮ ಮಟ್ಟದ ಶಿಕ್ಷಣವನ್ನು ವೊಕೇಷನಲ್ ಎಜುಕೇಷನ್ ಎಂದು ಪರಿಗಣಿಸುವುದುಂಟು. ಈ ಮಟ್ಟದಲ್ಲಿ ಕೇವಲ ಕಾರ್ಯನಿರ್ವಹಣೆಗೆ ಸಂಬಂಧಿಸಿದ ಕೌಶಲ್ಯವನ್ನು ಮಾತ್ರ ದೊರಕಿಸಲಾಗುವುದು. ಇಂಗ್ಲೆಂಡಿನಲ್ಲಿ ಈ ತಾಂತ್ರಿಕ ಶಿಕಣದ ಪರಿಮಿತಿಯಲ್ಲಿ ತಂತ್ರಜ್ಞಾನದ ಬಳಕೆ ಅಗತ್ಯವಿರುವ ಎಲ್ಲ ಮಟ್ಟದ ಔದ್ಯೋಗಿಕ ಶಿಕ್ಷಣವನ್ನೂ ಸೇರಿಸುವುದುಂಟು. ತಾಂತ್ರಿಕ ಶಿಕ್ಷಣಕ್ಕೆ ಗಣಿತ ಶಾಸ್ತ್ರ. ಭೌತಶಾಸ್ತ್ರ. ರಸಾಯನಶಾಸ್ತ್ರ ಮತ್ತು ಅವನ್ನು ಅವಲಂಬಿಸಿರುವ ಇತರ ಶಾಸ್ತ್ರಗಳ ಮೂಲಭೂತ ವ್ಯಾಸಂಗ ಅಗತ್ಯವೆನಿಸುತ್ತದೆ. 

	ರಾಷ್ಟ್ರದ ಆರ್ಥಿಕ ಉನ್ನತಿ ಆಧುನಿಕ ಕಾಲದಲ್ಲಿ ಔದ್ಯೋಗಿಕರಣವನ್ನು ಅವಲಂಬಿಸಿರುತ್ತದೆ. ಉದ್ಯೋಗಗಳ ಬೆಳವಣಿಗೆ ಆ ದೇಶದಲ್ಲಿ ಸಿದ್ಧವಿರುವ ತಾಂತ್ರಿಕ ಜನಶಕ್ತಿಯನ್ನು ಅವಲಂಬಿಸಿರುತ್ತದೆ. ಆದ್ದರಿಂದ ಅಭಿವೃದ್ಧಿ ಯೋಜನೆಯ ಕಾರ್ಯಕರ್ತರು ರಾಷ್ಟ್ರದ ವಿವಿಧ ಉದ್ಯೋಗಗಳಿಗೆ ಅಗತ್ಯವೆನಿಸುವ ತಾಂತ್ರಿಕ ಜನಬಲವನ್ನು ಲೆಕ್ಕ ಹಾಕಿ ಸಕಾಲದಲ್ಲಿ ಅವರಿಗೆ ತಕ್ಕ ಶಿಕ್ಷಣವನ್ನು ಒದಗಿಸುವ ಕಡೆ ಗಮನ ಕೊಡಬೇಕಾಗುತ್ತದೆ. 

	ತಾಂತ್ರಿಕ ಶಿಕ್ಷಣ ನಾಲ್ಕು ಅಂತಸ್ತುಗಳಲ್ಲಿ ವ್ಯವಸ್ಥೆಗೊಳ್ಳಬೇಕಾಗುತ್ತದೆ. (1) ಅರ್ಧಕುಶಲ ಹಾಗೂ ಪೂರ್ಣ ಕುಶಲಕರ್ಮಿಗಳನ್ನು ತರಪೇತು ಮಾಡುವ ಕೈಗಾರಿಕಾ ಶಾಲೆಗಳು. (2) ಪ್ರೌಢಶಾಲಾ ಮಟ್ಟದ ಶಿಕ್ಷಣ ಮುಗಿಸಿದವರಿಗೆ ತರಪೇತು ನೀಡುವ ಪಾಲಿಟೆಕ್ನಿಕ್‍ಗಳು. (3) ವಿಶ್ವವಿದ್ಯಾಲಯದ ಮಟ್ಟದಲ್ಲಿ ಶಿಕ್ಷಣವನ್ನಿತ್ತು ಪದವೀಧರ ಎಂಜೀನಿಯರುಗಳನ್ನು ರೂಪಿಸುವ ಕಾಲೇಜುಗಳು ಮತ್ತು ಇತರ ಉನ್ನತ ತಾಂತ್ರಿಕ ಶಿಕ್ಷಣ ಸಂಸ್ಥೆಗಳು, (4) ಸ್ನಾತಕೋತ್ತರ ಮಟ್ಟದಲ್ಲಿ ಶಿಕ್ಷಣ ಮತ್ತು ಸಂಶೋಧನೆಗೆ ಸೌಲಭ್ಯವನ್ನು ಕಲ್ಪಿಸುವ ವಿಶಿಷ್ಟ ತಾಂತ್ರಿಕ ಶಿಕ್ಷಣ ಸಂಸ್ಥೆಗಳು. ಈ ಒಂದೊಂದೂ ಮಟ್ಟದ ಶಿಕ್ಷಿತ ತಾಂತ್ರಿಕ ಜನಬಲವೂ ರಾಷ್ಟ್ರದ ಔದ್ಯೋಗಿಕ ಪ್ರಗತಿಗೆ ತಕ್ಕ ಪ್ರಮಾಣದಲ್ಲಿ ಅಗತ್ಯವೆನಿಸುತ್ತದೆ. ಅವುಗಳಲ್ಲಿ; ಮೊದಲನೆಯ ವರ್ಗದವರು ಅತ್ಯಂತ ಅಧಿಕ ಸಂಖ್ಯೆಯಲ್ಲೂ ಕೊನೆಯ ವರ್ಗದವರು ಅತ್ಯಲ್ಪ ಸಂಖ್ಯೆಯಲ್ಲೂ ಬೇಕಾಗುತ್ತಾರೆ. ಈ ದೃಷ್ಟಿಯಿಂದ ರಾಷ್ಟ್ರದಲ್ಲಿ ಅರ್ಧ ಕುಶಲ ಮತ್ತು ಪೂರ್ಣ ಕುಶಲಕರ್ಮಿಗಳನ್ನು ತರಪೇತು ಮಾಡುವ ಕೈಗಾರಿಕಾ ಸಂಸ್ಥೆಗಳು ಅತ್ಯಧಿಕ ಸಂಖ್ಯೆಯಲ್ಲಿ ಏರ್ಪಡಬೇಕು. 

	ಭಾರತದಲ್ಲಿ ತಾಂತ್ರಿಕ ಶಿಕ್ಷಣ : ಭಾರತದಲ್ಲಿ ಮೊಟ್ಟಮೊದಲ ಎಂಜಿನಿಯರಿಂಗ್ ಕಾಲೇಜು 1847 ರಲ್ಲಿ ಉತ್ತರಪ್ರದೇಶದ ರೂರ್ಕಿಯಲ್ಲಿ ಪ್ರಾರಂಭವಾಯಿತು. ಅದು ಕೇವಲ ಸಿವಿಲ್ ಎಂಜಿನಿಯರಿಂಗ್‍ನಲ್ಲಿ ಮಾತ್ರ ಶಿಕ್ಷಣ ವೀಯತ್ತಿತ್ತು. ಅಂದಿನ ಆಳರಸರಿಗೆ ಅಗತ್ಯವಾಗಿದ್ದುದು, ರಸ್ತೆ, ಕಟ್ಟಡ, ಸೇತುವೆ ಮುಂತಾದ ಕಾಮಗಾರಿಗಳ ನಿರ್ಮಾಣ ಮುಂತಾದವು. ಆದ್ದರಿಂದ ಅವಕ್ಕೆ ಸಂಬಂದಿಸಿದ ಶಿಕ್ಷಣಕ್ಕೆ ಮಾತ್ರ ಅಲ್ಲಿ ಅವಕಾಶ ಕಲ್ಪಿಸಲಾಗಿತ್ತು. ದಿನಬಳಕೆಯ ಉತ್ಪನ್ನಗಳ ಹಾಗೂ ಯಂತ್ರಗಳ ನಿರ್ಮಾಣಕ್ಕೆ ನೆರವಾಗತಕ್ಕ ಯಂತ್ರ ವಿಜ್ಞಾನ ಮತ್ತು ಇತರ ಎಂಜಿನಿಯರಿಂಗ್ ಶಾಖೆಗಳ ಶಿಕ್ಷಣಕ್ಕೆ ಅವಕಾಶ ಕಲ್ಪಿಸಿರಲಿಲ್ಲ, ಭಾರತದ ಮೂಲವಸ್ತುಗಳನ್ನು ಕೊಂಡೊಯ್ದು ತಮ್ಮ ದೇಶದಲ್ಲಿ ಯಂತ್ರಗಳನ್ನು ಬಳಕೆಯ ಉತ್ಪನ್ನಗಳನ್ನೂ ತಯಾರಿಸಿ ಇಲ್ಲಿಗೆ ತಂದು ಮಾರಾಟ ಮಾಡುವ ಅವರ ವಾಣಿಜ್ಯ ನೀತಿಗೆ ಸ್ವಾಭಾವಿಕವಾಗಿ ಅದು ಸರಿಯೆನಿಸಿತ್ತು. ಅನಂತರ ಬಂಗಾಳ, ಬೊಂಬಾಯಿ ಮತ್ತು ಮದ್ರಾಸ್‍ಗಳಲ್ಲಿ 1856-58ರ ವೇಳೆಯಲ್ಲಿ ಮೂರು ಎಂಜಿನಿಯರಿಂಗ್ ಕಾಲೇಜುಗಳು ಆರಂಭವಾದುವು. ಅಲ್ಲೂ ಸಿವಿಲ್ ಎಂಜಿನಿಯರಿಂಗ್ ಶಿಕ್ಷಣಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. 1887 ಬೊಂಬಾಯಿಯ ವಿಕ್ಟೋರಿಯ ಜೂಬಿಲಿ ಇನ್‍ಸ್ಟಿಟ್ಯೂಟನ್ನು ಆರಂಭಿಸಲಾಯಿತು. ಅಲ್ಲಿ ಡಿಪ್ಲೊಮ ಮಟ್ಟದ ವಿದ್ಯುತ್ ಎಂಜಿನಿಯರಿಂಗ್ ಮತ್ತು ಯಂತ್ರ ಎಂಜಿನಿಯರಿಂಗ್, ನೇಯ್ಗೆ ಎಂಜಿನಿಯರಿಂಗ್ ವಿಭಾಗಗಳಲ್ಲಿ ಡಿಪ್ಲೊಮ ಮಟ್ಟದ ಶಿಕ್ಷಣಕ್ಕೆ ಅವಕಾಶ ಕಲ್ಪಿಸಲಾಯಿತು. ಮೊಟ್ಟಮೊದಲನೆಯದಾಗಿ 1915ರಲ್ಲಿ ಬೆಂಗಳೂರಿನ ಭಾರತ ವಿಜ್ಞಾನ ಸಂಸ್ಥೆಯಲ್ಲಿ (ತಾತಾ ವಿಜ್ಞಾನ ಮಂದಿರ) ವಿದ್ಯುತ್ ಎಂಜಿನಿಯರಿಂಗ್‍ನಲ್ಲಿ ಪದವೀ ಮಟ್ಟದಲ್ಲಿ ಶಿಕ್ಷಣ ಸೌಲಭ್ಯ ಆರಂಭವಾಯಿತು. ಯಂತ್ರ ಎಂಜಿನಿಯರಿಂಗ್ ಶಿಕ್ಷಣಕ್ಕೆ ಹಾಗೂ ಲೋಹ ಎಂಜಿನಿಯರಿಂಗ್ ಶಿಕ್ಷಣಕ್ಕೆ ಬನಾರಸ್ ವಿಶ್ವವಿದ್ಯಾಲಯದಲ್ಲಿ 1917ರಲ್ಲಿ ಅವಕಾಶ ಕಲ್ಪನೆಯಾಯಿತು. ಕರ್ನಾಟಕದಲ್ಲಿ (ಮೈಸೂರು) ಅದೇ ವರ್ಷ ಮೈಸೂರು ವಿಶ್ವವಿದ್ಯಾನಿಲಯ ಸಿವಿಲ್ ಮತ್ತು ಯಂತ್ರ ಎಂಜಿನಿಯರಿಂಗ್ ಶಿಕ್ಷಣವನ್ನು ಆರಂಭಿಸಿತು. 1925ರ ಸುಮಾರಿಗೆ ವಿದ್ಯುತ್ ಎಂಜಿನಿಯರಿಂಗ್ ಶಿಕ್ಷಣಕ್ಕೂ ಅವಕಾಶ ಕಲಿಸಿತು. ಬೆಂಗಳೂರಿನ ತಾತಾ ವಿಜ್ಞಾನ ಮಂದಿರ ಮತ್ತು ಇತರ ಕೆಲವು ಸಂಸ್ಥೆಗಳು ಕ್ರಮಕ್ರಮವಾಗಿ ವಿದ್ಯುತ್ ಎಂಜಿನಿಯರಿಂಗ್ ಶಿಕ್ಷಣಕ್ಕೆ ಅವಕಾಶ ಕಲ್ಪಿಸಿದುವು. 

	ಸ್ವಾತಂತ್ರ್ಯಾನಂತರದ ದಿನಗಳಲ್ಲಿ ತಾಂತ್ರಿಕ ಶಿಕ್ಷಣ ಎಲ್ಲ ಮಟ್ಟಗಳಲ್ಲೂ ತೀವ್ರ ವೇಗದಲ್ಲಿ ವಿಸ್ತರಿಸುತ್ತಿದೆ. 1947ರಲ್ಲಿ ನೇಮಕವಾದ ತಾಂತ್ರಿಕ ಜನಬಲ ಸಮಿತಿಯ ಸಲಹೆಗಳನ್ನನುಸರಿಸಿ ರಾಷ್ಟ್ರದ ಅಭಿವೃದ್ಧಿ ಯೋಜನೆಗೆ ಬೇಕಾದಷ್ಟು ವಿವಿಧ ಮಟ್ಟದ ತಾಂತ್ರಿಕ ಜನಬಲವನ್ನು ಒದಗಿಸಲು ದೇಶಾದ್ಯಂಥ ತಾಂತ್ರಿಕ ಶಿಕ್ಷಣ ಸಂಸ್ಥೆಗಳು ಆರಂಭವಾದುವು. ಈ ವಿಸ್ತರಣಾ ಕಾರ್ಯದಲ್ಲಿ ಅಮೆರಿಕದ ಸಂಯುಕ್ತ ಸಂಸ್ಥಾನ, ರಷ್ಯ, ಜರ್ಮನಿ ಮುಂತಾದ ರಾಷ್ಟ್ರಗಳಿಂದಲೂ ಯುನೆಸ್ಕೊ ಸಂಸ್ಥೆಯಿಂದಲೂ ದೊರೆತ ಪ್ರಾಧ್ಯಾಪಕರ ಮತ್ತು ಉಪಕರಣಾದಿಗಳ ಸಹಾಯ ಸೌಲಭ್ಯಗಳನ್ನು ಬಳಸಿಕೊಳ್ಳಲಾಯಿತು. ಕೊಲಂಬೋ ಯೋಜನೆಯ ಮೂಲಕವೂ ಅಂಥ ಸೌಲಭ್ಯಗಳು ದೊರೆತವು. 

	ಔದ್ಯೋಗಿಕ ಶಿಕ್ಷಣ ಸಾಂಸ್ಕøತಿಕ ಶಿಕ್ಷಣಕ್ಕಿಂತ ಕೀಳೆಂಬ ಮನೋಭಾವನೆ ಜನತೆಯಲ್ಲಿ ನೆಲೆಸಿದ್ದುದರ ಫಲವಾಗಿ ಶಾಲಾಮಟ್ಟದಲ್ಲಿ ತಾಂತ್ರಿಕ ಶಿಕ್ಷಣ ಅಷ್ಟಾಗಿ ಪ್ರಗತಿ ಸಾಧಿಸಲಿಲ್ಲ. ಆ ಮಟ್ಟದಲ್ಲಿ ತರಪೇತು ನೀಡುತ್ತಿದ್ದ ಕೈಗಾರಿಕಾ ಶಾಲೆಗಳನ್ನು ಈಚೆಗೆ ತಾಂತ್ರಿಕ ಪ್ರೌಢಶಾಲೆಗಳನ್ನಾಗಿ ಪರಿವರ್ತಿಸಿ ಆ ಮೂಲಕ ಔದ್ಯೋಗಿಕ ಶಿಕ್ಷಣಕ್ಕೆ ಹೆಚ್ಚಿನ ಗೌರವವನ್ನು ತಂದುಕೊಡುವ ಯತ್ನ ನಡೆಯುತ್ತಿದೆ. ಜೊತೆಗೆ ಎಲ್ಲ ಮಟ್ಟದ ಸಾಂಸ್ಕøತಿಕ ಶಿಕ್ಷಣದಲ್ಲೂ ಸ್ವಲ್ಪಮಟ್ಟಿಗೆ ಔದ್ಯೋಗಿಕ ಶಿಕ್ಷಣವನ್ನೂ ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿ ಸ್ವಲ್ಪ ಮಟ್ಟಿಗೆ ಸಾಂಸ್ಕøತಿಕ ಶಿಕ್ಷಣವನ್ನೂ ನೀಡುವ ವ್ಯವಸ್ಥೆಯೂ ಏರ್ಪಡುತ್ತಿದೆ. 1950-51ರಲ್ಲಿ ಭಾರತದಲ್ಲಿ 40 ಎಂಜಿನಿಯರಿಂಗ್ ಕಾಲೇಜುಗಳಿದ್ದು 4120 ಮಂದಿ ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ ಕಲ್ಪಿಸಿತ್ತು. ಡಿಪ್ಲೊಮ ಮಟ್ಟದಲ್ಲಿ ಶಿಕ್ಷಣವೀಯುವ 86 ಸಂಸ್ಥೆಗಳಿದ್ದು ಸುಮಾರು 6,000 ಮಂದಿ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುತ್ತಿದ್ದವು. ಮೊದಲ ಮತ್ತು ಎರಡನೆಯ ಯೋಜನೆಯ ಕಾಲಾವಧಿಯಲ್ಲಿ ಈ ಎರಡು ಮಟ್ಟದ ತಾಂತ್ರಿಕ ಶಿಕ್ಷಣ ಸಂಸ್ಥೆಗಳು ಸಂಖ್ಯೆಯಲ್ಲೂ ಪ್ರವೇಶ ಸೌಲಭ್ಯದಲ್ಲೂ ತೀವ್ರ ವೇಗದಲ್ಲಿ ವಿಸ್ತರಿಸಿದುವು. ಮೂರನೆಯ ಯೋಜನೆಯ ಅಂತ್ಯದ ವೇಳೆಗೆ ರಾಷ್ಟ್ರದಲ್ಲಿ 120 ಪದವೀ ಮಟ್ಟದ ತಾಂತ್ರಿಕ ಶಿಕ್ಷಣ ಸಂಸ್ಥೆಗಳಿದ್ದು 20,000 ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ ಏರ್ಪಟ್ಟಿತ್ತು. ಡಿಪ್ಲೊಮ ಮಟ್ಟದಲ್ಲಿ 270 ಸಂಸ್ಥೆಗಳು ಏರ್ಪಟ್ಟು 40,000 ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶವನ್ನು ಕಲ್ಪಿಸಿದ್ದುವು. ಈಚೆಗೆ 14 ರೀಜನಲ್ ಎಂಜಿನಿಯರಿಂಗ್ ಕಾಲೇಜುಗಳೂ 4 ಡಿಪ್ಲೊಮ ಶಿಕ್ಷಕರ ತರಪೇತು ಸಂಸ್ಥೆಗಳೂ ಆರಂಭವಾಗಿವೆ. ಪದವಿಮಟ್ಟದಲ್ಲಿ ರಾಸಾಯನಿಕ ಎಂಜಿನಿಯರಿಂಗ್, ಗಣಿತಶಾಸ್ತ್ರದ ಎಂಜಿನಿಯರಿಂಗ್, ಲೋಹ ಎಂಜಿನಿಯರಿಂಗ್, ಎಲೆಕ್ಟ್ರಾನಿಕ್ ಎಂಜಿನಿಯರಿಂಗ್, ವಾಸ್ತು ವಿಜ್ಞಾನ, ಸಾಗರ ಎಂಜಿನಿಯರಿಂಗ್ ಮುಂತಾದ ನೂತನ ತಾಂತ್ರಿಕ ಕ್ಷೇತ್ರಗಳಲ್ಲೂ ಶಿಕ್ಷಣ ವ್ಯವಸ್ಥೆ ಆರಂಭವಾಯಿತು. ಸ್ನಾತಕೋತ್ತರ ಮಟ್ಟದಲ್ಲಿ ಖರಗಪುರ, ಬೊಂಬಾಯಿ, ಮದ್ರಾಸ್, ಕಾನ್ಪುರ, ದೆಹಲಿ ಈ ಸ್ಥಳಗಳಲ್ಲಿ ಪದವೀ ಮಟ್ಟದ ಜೊತೆಗೆ ಸ್ನಾತಕೋತ್ತರ ಶಿಕ್ಷಣ ಮತ್ತು ಸಂಶೋಧನೆಗಳಿಗೂ ಅವಕಾಶ ಕಲ್ಪಿಸಿರುವ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐ.ಐ.ಟಿ) ಎಂಬ ವಿಶಿಷ್ಟ ತಾಂತ್ರಿಕ ಶಿಕ್ಷಣ ಸಂಸ್ಥೆಗಳು ಆರಂಭವಾಗಿ ಉನ್ನತ ಗುಣಮಟ್ಟದ ತಾಂತ್ರಿಕ ಶಿಕ್ಷಣಕ್ಕೆ ಹೆಸರಾಗಿವೆ. ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ, ಪದವಿ ಮತ್ತು ಸ್ನಾತಕೋತ್ತರ ಮಟ್ಟದಲ್ಲಿ ಎಂಜಿನಿಯರಿಂಗ್ ಮತ್ತು ಔದ್ಯೋಗಿಕ ವಿಜ್ಞಾನ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಶಿಕ್ಷಣವನ್ನು ನೀಡುತ್ತಿದೆ. ವೈಜ್ಞಾನಿಕ ಮತ್ತು ಔದ್ಯೋಗಿಕ ಸಂಶೋಧನ ಪರಿಷತ್ತಿನ (ಸಿ.ಎಸ್.ಐ.ಆರ್.) ಆಶ್ರಯದಲ್ಲಿ ಏರ್ಪಟ್ಟಿರುವ ಸುಮಾರು 40 ರಾಷ್ಟ್ರೀಯ ಪ್ರಯೋಗಾಲಯಗಳಲ್ಲಿ ವಿವಿಧ ಔದ್ಯೋಗಿಕ ಕ್ಷೇತ್ರಗಳಲ್ಲಿ ಸಂಬಂಧಿಸಿದ ಉನ್ನತ ಶಿಕ್ಷಣಕ್ಕೂ ಸಂಶೋಧನೆಗಳಿಗೂ ಅವಕಾಶ ಕಲ್ಪಸಿದೆ. ಅವುಗಳಲ್ಲಿ ಕೆಲವು ಪರಿಗಣಿತ ವಿಶ್ವವಿದ್ಯಾಲಯಗಳ ಅಂತಸ್ತನ್ನು ಪಡೆದು ತಮ್ಮದೇ ಆದ ಪದವಿಗಳನ್ನು ನೀಡುತ್ತಿವೆ. ಜೊತೆಗೆ ರಾಷ್ಟ್ರದಲ್ಲಿ ವಿಸ್ತರಿಸುತ್ತಿರುವ ಔದ್ಯೋಗಿಕ ಕ್ಷೇತ್ರಕ್ಕೆ ಸಂಬಂಧಿಸಿದ ತಾಂತ್ರಿಕ ಸಮಸ್ಯೆಗಳನ್ನು ಪರಿಗಣಿಸಿಕೊಟ್ಟು ಅವುಗಳ ಪ್ರಗತಿಗೂ ನೆರವಾಗುತ್ತವೆ. ಹೀಗೆ ತಾಂತ್ರಿಕ ಶಿಕ್ಷಣ ವಿಸ್ತರಿಸಿದುದರ ಫಲವಾಗಿ ಅದಕ್ಕಾಗಿ ಭಾರತದಿಂದ ವಿದ್ಯಾರ್ಥಿಗಳು ಅನ್ಯದೇಶಕ್ಕೆ ಹೋಗುತ್ತಿದ್ದ ಪ್ರವೃತ್ತಿ ಈಚೆಗೆ ಕಡಿಮೆಯಾಗುತ್ತಿದೆ. ಐ.ಐ.ಟಿ. ಗಳೂ ಕೆಲವು ಎಂಜಿನಿಯರಿಂಗ್ ಕಾಲೇಜುಗಳೂ ಉನ್ನತ ತಾಂತ್ರಿಕ ಶಿಕ್ಷಣಕ್ಕೆ ಸೌಲಭ್ಯವನ್ನು ಕಲ್ಪಿಸಿಕೊಡುತ್ತವೆ. ಐದನೆಯ ಪಂಚವಾರ್ಷಿಕ ಯೋಜನೆಯ ಸುಮಾರಿನಲ್ಲಿ ರಾಷ್ಟ್ರದ ಔದ್ಯೋಗಿಕ ಅವಶ್ಯಕತೆಗೆ ಬೇಕಾಗಿದ್ದ ಎಲ್ಲ ಮಟ್ಟದ ತಾಂತ್ರಿಕ ಜನಬಲವನ್ನು ಇಲ್ಲಿನ ಶಿಕ್ಷಣ ಸಂಸ್ಥಗಳೇ ಒದಗಿಸಲು ಸಾಧ್ಯವಾಯಿತು. 1956ರಲ್ಲಿ ನೇಮಕವಾದ ಕೊಠಾರಿ ಶಿಕ್ಷಣ ಆಯೋಗದ ವರದಿಯಂತೆ ಎಲ್ಲ ರಾಜ್ಯಗಳಲ್ಲೂ ತಾಂತ್ರಿಕ ಶಿಕ್ಷಣದ ಆಡಳಿತವನ್ನು ತಾಂತ್ರಿಕ ಶಿಕ್ಷಣ ನಿರ್ದೇಶಕರ ಅಧಿಕಾರಕ್ಕೊಳಪಡಿಸಲಾಗುತ್ತಿದೆ. 

	ಅಖಿಲ ಭಾರತದ ಮಟ್ಟದಲ್ಲಿ ತಾಂತ್ರಿಕ ಶಿಕ್ಷಣದ ಗುಣಮಟ್ಟವನ್ನು ಕಾಪಾಡಲು ಆಲ್ ಇಂಡಿಯ ಕೌನ್ಸಿಲ್ ಆಫ್ ಟೆಕ್ನಿಕಲ್ ಎಜುಕೇಷನ್, ದೆಹಲಿಯ ಕೇಂದ್ರ ಸಚಿವಾಲಯ ಮತ್ತು ಇತರ ತಾಂತ್ರಿಕ ಪರಿಷತ್ತುಗಳು ಸಹಾಯ ಮಾಡುತ್ತಿವೆ.

	ಪದವೀ ಮಟ್ಟದಲ್ಲಿ ತಾಂತ್ರಿಕ ಶಿಕ್ಷಣ ಪ್ರಿ-ಯೂನಿವರ್ಸಿಟಿ ಶಿಕ್ಷಣ ಮುಗಿಸಿದ ಮೇಲೆ 4-5 ವರ್ಷಗಳ ಅವಧಿಯದಾಗಿರುತ್ತದೆ. ಪ್ರವೇಶಾವಕಾಶಕ್ಕೆ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತಶಾಸ್ತ್ರವನ್ನು ವ್ಯಾಸಂಗ ಮಾಡಿರಬೇಕೆಂಬ ನಿಯಮವುಂಟು. ತಾಂತ್ರಿಕ ಶಿಕ್ಷಣದಲ್ಲಿ ಮಾಸ್ಟರ್ ಪದವಿ ಎರಡು ವರ್ಷದ್ದಾಗಿದ್ದು ವಿಶ್ವವಿದ್ಯಾನಿಲಯಗಳೂ ಎಂಜಿನಿಯರಿಂಗ್ ಕಾಲೇಜುಗಳೂ ಐ.ಐ.ಟಿ ಗಳೂ ಆ ಶಿಕ್ಷಣಕ್ಕೆ ಅವಕಾಶ ಕಲ್ಪಿಸಿವೆ. ಡಾಕ್ಟರೇಟ್ ಪದವಿ 3 ಅಥವಾ 4 ವರ್ಷದ್ದಾಗಿರುತ್ತದೆ. ಡಿಪ್ಲೊಮ ಮಟ್ಟದ ಶಿಕ್ಷಣ ಮೂರು ವರ್ಷದ ಪೂರ್ಣ ಕಾಲದ್ದಾಗಿರುತ್ತದೆ. ತಾಂತ್ರಿಕ ಶಿಕ್ಷಣದಲ್ಲಿ ಡಿಪ್ಲೊಮ ಪಡೆದವರು ಪೂರ್ಣ ಆಥವಾ ಭಾಗಶಃ ಕಾಲದ ವಿದ್ಯಾರ್ಥಿಗಳಿಗಾಗಿ ಪದವಿ ಮಟ್ಟದ ಶಿಕ್ಷಣವನ್ನು ಪಡೆಯುವ ಸೌಲಭ್ಯವನ್ನು, ಆರಿಸಿದ ಕೆಲವು ಸಂಸ್ಥೆಗಳಲ್ಲಿ ಏರ್ಪಡಿಸಿದೆ. 		(ಕೆ.ಸಿ.ಬಿಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ